ಕನ್ನಡದಲ್ಲಿ ವಿಶ್ವಕೋಶಗಳು : ಜ್ಞಾನದ ವಿವಿಧ ಶಾಖೆಗಳ ವ್ಯಾಪಕ ವಿವೇಚನೆಯನ್ನುಳ್ಳ ವಿಶ್ವಕೋಶಗಳ ರಚನೆ ಕರ್ನಾಟಕದಲ್ಲಿ ಹಿಂದಿನಿಂದ ಸಾಗಿ ಬಂದಿದೆ. ಪ್ರಬುದ್ಧ ಸಮಾಜಕ್ಕೆ ಅಗತ್ಯವೆನಿಸಿದ ಹಲವಾರು ಶಾಸ್ತ್ರಗಳ ಸಾರವನ್ನು ಒಂದೇ ಗ್ರಂಥವಾಗಿ ರಚಿಸುವ ಬಗೆಗಿನ ಇಂಥ ಪ್ರಯತ್ನ ಸು.800 ವರ್ಷಗಳಿಂದ ಒಂದಾದ ಮೇಲೊಂದು ನಡೆದಿದೆ. ಈ ವಿಷಯದಲ್ಲಿ ಕಲ್ಯಾಣದ ಚಾಳುಕ್ಯ ಚಕ್ರವರ್ತಿ 3ನೆಯ ಸೋಮೇಶ್ವರನ (1127-39) ಮಾನಸೋಲ್ಲಾಸ ಅಥವಾ ಅಬಿಲಷಿತಾರ್ಥಚಿಂತಾಮಣಿ, ಕೆಳದಿಯ ಒಂದನೆಯ ಬಸವಪ್ಪ ನಾಯಕನ (1697-1714) ಶಿವತತ್ತ್ವರತ್ನಾಕರ- ಇವು ಸಂಸ್ಕೃತದಲ್ಲಿ ರಚಿತವಾದ ವಿಶ್ವಕೋಶದಂಥ ಗ್ರಂಥಗಳು.

ನಿಜಗುಣಶಿವಯೋಗಿಯ ವಿವೇಕ ಚಿಂತಾಮಣಿ (ಸು.1500) ಕನ್ನಡದ ಮೊಟ್ಟಮೊದಲ ಜ್ಞಾನಕೋಶ. ಈ ಗ್ರಂಥವನ್ನು ಸಾತಾರಾ ಜಿಲ್ಲೆಯ ಸಿಂಘಣಾಪುರದ ಕಾಂತೇಶ್ವರ ಎಂಬ ಕವಿ 16ನೆಯ ಶತಮಾನದಲ್ಲಿ ಮರಾಠಿಗೂ ತಮಿಳುನಾಡಿನಲ್ಲಿ 17ನೆಯ ಶತಮಾನದಲ್ಲಿ ಪ್ರಸಿದ್ಧನಾಗಿದ್ದ ಶಿವಪ್ರಕಾಶನೆಂಬ ಕವಿ ತಮಿಳು ಭಾಷೆಗೂ 18ನೆಯ ಶತಮಾನದಲ್ಲಿ ಮೈಸೂರು ಭಾಗದ ಹರಪುರದ ಲಿಂಗರಾಜ ಸಂಸ್ಕೃತ ಭಾಷೆಗೂ ಭಾಷಾಂತರಿಸಿದರೆಂಬುದು ಈ ಗ್ರಂಥದ ಮಹತ್ವಕ್ಕೆ ನಿದರ್ಶನಗಳಾಗಿವೆ. ವೇದಪುರಾಣಶಾಸ್ತ್ರದೊಳ್ ನೇಮಿಸಿ ತೋರ್ಪ ವಿಶ್ವವಿಷಯಂಗಳ ಸಂಸ್ಥಿತಿಯಂ ವಿವೇಕಚಿಂತಾಮಣಿ ಎಂಬ ಪೆಸರಿಟ್ಟು ಪ್ರೇಮದಿ ಪೇಳ್ವೆಂ ಎಂಬುದಾಗಿ ಕವಿ ಗ್ರಂಥವನ್ನು ಪ್ರಾರಂಬಿಸಿದ್ದಾನೆ. ಈ ಗ್ರಂಥವನ್ನು 10 ಪರಿಚ್ಫೇದಗಳಾಗಿ ವಿಭಾಗಿಸಲಾಗಿದೆ. 535 ವಿವಿಧ ವಿಷಯಗಳನ್ನು ಕುರಿತು ಇಲ್ಲಿ ಹೇಳಲಾಗಿದೆ. ವೇದ, ವೇದಾಂಗ, ಉಪನಿಷತ್ತು, ಸ್ಮೃತಿಗಳು, ಕರ್ಮಗಳು, ವರ್ಣಧರ್ಮಗಳು, ಗಣಿತ, ತೂಕ, ಪ್ರಮಾಣ, ಪುರಾಣಗಳು, ಇತಿಹಾಸಗಳು, ಚಾರ್ವಾಕ, ಬೌದ್ಧ, ಕೌಳಯಾಮಲ, ಶಾಕ್ತೇಯ, ಪಾಂಚರಾತ್ರ, ವೈದಿಕ - ಲೌಕಿಕ ಶಾಸ್ತ್ರಗಳು, ಮೀಮಾಂಸೆ, ವೈಶೇಷಿಕ, ಸಾಂಖ್ಯ, ಪಾತಂಜಲ, ಮೋಕ್ಷಪ್ರತಿಪಾದನೆ, ಸೂತ್ರ, ಭಾಷ್ಯ, ವ್ಯಾಖ್ಯಾನ, ಲಕ್ಷಣಗಳು - ಇತ್ಯಾದಿ ವಿಷಯಗಳಿಂದ ಈ ಗ್ರಂಥ ಮುಂದುವರಿದಿದೆ. ಆಗಮಭೇದ, ಆಗಮಸಂಖ್ಯೆ, ಆಗಮಸಾರ, ಶೈವ ಭೇದಗಳು; ವಿಭೂತಿ, ರುದ್ರಾಕ್ಷಿ, ಲಿಂಗ, ಮಂತ್ರ ಸಾಧನೆಗಳು; ಸೃಷ್ಟಿಸ್ವರೂಪ, ಅಷ್ಟದಿಗ್ಗಜಗಳು, ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ, ಭೂಕೈಲಾಸ, ಹೇಮಕೂಟ, ಸಿದ್ಧವಟ, ಭರತವರ್ಷ, ರಾಜಲಕ್ಷಣ, ಛಂದಸ್ಸು, ಅಲಂಕಾರ, ಮಹಾಕಾವ್ಯ, ಗಮಕಿ, ವಾದಿ, ವಾಗ್ಮಿ, ಪುಣ್ಯಕ್ಷೇತ್ರಗಳು, ಅಹೋರಾತ್ರಿಗಳ ಕಲ್ಪನೆಗಳು, ನಕ್ಷತ್ರಮಂಡಲ, ಮರಣಸೂಚನೆ, ಉತ್ತಮಲೋಕ ಪ್ರಾಪ್ತಿ, ಪಾಪಿಷ್ಠರಿಗೆ ದುರ್ಗತಿ, ಚತುರ್ಯುಗಗಳು, ಶಾಸ್ತ್ರ ಪ್ರಯೋಜನ - ಇತ್ಯಾದಿ ವಿಷಯಗಳನ್ನು ಕುರಿತು ಗ್ರಂಥಕಾರ ಹೃದಯಂಗಮವಾಗಿ ವಿವೇಚಿಸಿದ್ದಾನೆ. ನಿಜವಾಗಿಯೂ ಇದು ಕನ್ನಡದ ಒಂದು ಜ್ಞಾನ ಭಂಡಾರವೆಂದು ಹೇಳಬಹುದು. ಮೊಟ್ಟಮೊದಲು ಸಂಗೀತಶಾಸ್ತ್ರವನ್ನು ಕುರಿತು ವಿಸ್ತಾರವಾಗಿ ಹೇಳಿರುವುದು ಈ ಗ್ರಂಥದಲ್ಲಿ ಮಾತ್ರ ಎಂಬುದು ಇಲ್ಲಿ ಸ್ಮರಣಾರ್ಹವಾಗಿದೆ.

ಇದಲ್ಲದೆ 2ನೆಯ ಚಾವುಂಡರಾಯನ ಲೋಕೋಪಕಾರ (ಸು.1150), ಲಕ್ಕಣ್ಣದಂಡೇಶನ ಶಿವತತ್ತ್ವಚಿಂತಾಮಣಿ (ಸು.1424), ಗುಬ್ಬಿಯ ಮಲ್ಲಣಾರ್ಯನ ವೀರಶೈವಾಮೃತ ಪುರಾಣ (ಸು.1513), ಮೈಸೂರು ವೀರರಾಜನ ಸಕಲವೈದ್ಯ ಸಂಹಿತಾಸಾರಾರ್ಣವ (ಸು.1720) ಎಂಬ ಗ್ರಂಥಗಳು ವಿಶ್ವಕೋಶವನ್ನು ರಚಿಸುವವರಿಗೆ ಹೆಚ್ಚು ವಿಷಯಗಳನ್ನು ಒದಗಿಸಿಕೊಡುವ ಮಹತ್ವದ ಗ್ರಂಥಗಳಾಗಿವೆ.

ಜ್ಞಾನಭಂಡಾರಗಳೆನಿಸಿದ ಇಂಥ ಗ್ರಂಥಗಳ ರಚನೆ ಈಚಿನ ವಿಶ್ವಕೋಶಗಳಿಗೆ ತಳಹದಿಯಾಯಿತೆನ್ನಬಹುದು. ಶಾಸ್ತ್ರೀಯವಾದ ವಿಶ್ವಕೋಶ ರಚನೆ ಪ್ರಾರಂಭವಾದುದು ಈಚೆಗೆ - 20ನೆಯ ಶತಮಾನದ ಎರಡು ಮೂರು ದಶಕಗಳು ಕಳೆದಮೇಲೆ.
ಬಾಲಪ್ರಪಂಚ: ಶಿವರಾಮ ಕಾರಂತರಿಂದ ರಚಿತವಾದ ಮೂರು ಸಂಪುಟಗಳ ಮೊದಲ ವಿಶ್ವಕೋಶ (1931). ಸಚಿತ್ರವಾದ ಈ ಗ್ರಂಥ ಮಕ್ಕಳಿಗಾಗಿ ಸೃಷ್ಟಿಯಾದುದು. ಇಲ್ಲಿ ವಿಜ್ಞಾನ ವಿಷಯಗಳು ಬರುತ್ತವೆ. ನಡುನಡುವೆ ಕಥೆ, ಕವನ ಮುಂತಾದ ರಂಜಕ ವಿಷಯಗಳು ಬರುವುದರಿಂದ ಮಕ್ಕಳು ಆಸಕ್ತಿಯಿಂದ ಇವನ್ನು ಓದಲು ಅನುಕೂಲವೇರ್ಪಟ್ಟಿದೆ. ಇದು ಇಂಗ್ಲಿಷಿನಲ್ಲಿ ಆರ್ಥರ್ ಮೀ ಎಂಬಾತ ಮೊದಲು ಮಕ್ಕಳಿಗಾಗಿ ರಚಿಸಿದ ವಿಶ್ವಕೋಶದ ಮಾದರಿಯಲ್ಲಿದೆ.

ವಿಜ್ಞಾನಪ್ರಪಂಚ: ಶಿವರಾಮ ಕಾರಂತರಿಂದ ನಾಲ್ಕು ಸಂಪುಟಗಳಲ್ಲಿ ರಚಿತವಾದ (1959-1964) ವಿಜ್ಞಾನ ವಿಷಯ ವಿಶ್ವಕೋಶ. ಮೊದಲ ಭಾಗವಾದ ‘ಈ ಜಗತ್ತು’ ಎಂಬುದರಲ್ಲಿ ಖಗೋಳ, ಭೂಗೋಳ, ಸಾಗರ, ವಾತಾವರಣ ಮುಂತಾದ ವಿಷಯಗಳೂ ಎರಡನೆಯ ಭಾಗವಾದ ‘ಜೀವ, ಜೀವನ’ದಲ್ಲಿ ಜೀವವಿಜ್ಞಾನ, ಸಸ್ಯ ವಿಜ್ಞಾನ, ಪ್ರಾಗ್ಜೀವ ವಿಜ್ಞಾನ, ಆರೋಗ್ಯ ಶಾಸ್ತ್ರ, ಮನೋವಿಜ್ಞಾನ, ಪ್ರಕೃತಿ ವಿಜ್ಞಾನಗಳೂ ಮೂರನೆಯ ಭಾಗವಾದ ‘ವಸ್ತು ಚೈತನ್ಯ’ದಲ್ಲಿ ವಿಜ್ಞಾನದ ಇತಿಹಾಸ, ಪರಮಾಣುಚರಿತ್ರೆ, ರಸಾಯನ ವಿಜ್ಞಾನ, ಭೌತವಿಜ್ಞಾನ, ಸಾಪೇಕ್ಷ ಸಿದ್ಧಾಂತ ಮೊದಲಾದ ವಿಷಯಗಳೂ ನಾಲ್ಕನೆಯ ಭಾಗವಾದ ವಿಜ್ಞಾನ ಸಾಧನದಲ್ಲಿ ಎಲೆಕ್ಟ್ರಾನಿಕ್ಸ್‌, ಎಂಜಿನಿಯರಿಂಗ್, ಬದುಕಿನ ಸಮಸ್ಯೆಗಳು, ಸಾಹಸಗಳು, ವಿಜ್ಞಾನಿಗಳು- ಮುಂತಾದ ವಿಷಯಗಳೂ ಬಂದಿವೆ. ಪ್ರೌಢಶಾಲೆಯ ಕೊನೆಯ ಹಂತದಲ್ಲಿರುವ ವಿದ್ಯಾರ್ಥಿ ಶ್ರಮವಿಲ್ಲದೆ ನೇರವಾಗಿ ಕನ್ನಡದ ಮೂಲಕ ವಿಜ್ಞಾನ ವಿಷಯಗಳನ್ನು ತಿಳಿಯಲು ಈ ಗ್ರಂಥಗಳು ಉತ್ತಮ ಸಾಧನಗಳಾಗಿವೆ. ಪಾರಿಭಾಷಿಕ ಶಬ್ದಗಳನ್ನು ಆಯುವಲ್ಲಿ, ಶಾಸ್ತ್ರೀಯ ವಿಷಯವನ್ನು ಪ್ರತಿಪಾದಿಸುವಲ್ಲಿ ಉದ್ದಕ್ಕೂ ಲೇಖಕರೂ ತಮ್ಮ ಸಹಜ ಸರಳ ಮನೋಧರ್ಮವನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ. ಉದಾಹರಣೆಗಳು ಕೇವಲ ವಿದೇಶೀಯವಾಗಿಲ್ಲ. ಬೇಕಾದಷ್ಟು ದೇಶೀಯ ನಿದರ್ಶನಗಳೂ ಬರುತ್ತವೆ. ಹತ್ತು ಕಡೆಯಿಂದ ಸಂಗ್ರಹಿಸಿದ ವಿಷಯಗಳನ್ನು ವಿಚಾರದ ಒರೆಗಲ್ಲಿನಲ್ಲಿ ಸಾಣೆ ಹಿಡಿದು ನಿರೂಪಿಸಲಾಗಿದೆ. ಈ ಸಂಪುಟಗಳಲ್ಲಿ ವಿಜ್ಞಾನದ ಸಮಗ್ರವಾದ ಆದರೆ ಸಂಕ್ಷೇಪ ನಿರೂಪಣೆಯನ್ನು ಕಾಣಬಹುದಾಗಿದೆ. ವಿಷಯಕ್ಕೆ ಒಪ್ಪುವ ಹಲವಾರು ಚಿತ್ರಗಳಿವೆ. ಇದೆಲ್ಲವನ್ನು ಒಬ್ಬ ವ್ಯಕ್ತಿಯ ಸಾಧನೆ ಎಂಬ ವಿಷಯವನ್ನು ನೆನೆದಾಗ ಹತ್ತು ಮುಖಗಳ ಕಾರಂತರ ಬಗ್ಗೆ ಓದುಗರ ಮನಸ್ಸಿನಲ್ಲಿ ಕೃತಜ್ಞತೆ ಮೂಡುತ್ತದೆ.

ಅನುವಾದಿತ ವಿಶ್ವಕೋಶ: ಕನ್ನಡ ವಿಶ್ವಕೋಶ ಚರಿತ್ರೆಯಲ್ಲಿ ಗಮನಾರ್ಹವಾದ ಒಂದು ಗ್ರಂಥ 1927ರಲ್ಲಿ ಪ್ರಕಟವಾಯಿತು. ಬೆಂಗಳೂರಿನ ಟ್ರ್ಯಾಕ್ ಅಂಡ್ ಬುಕ್ ಸೊಸೈಟಿಯವರು ಪ್ರಕಟಿಸಿರುವ ಈ ಎರಡು ಸಂಪುಟಗಳ ಹೆಸರು ‘ಹೊಸ ಒಡಂಬಡಿಕೆಯ ವೇದಕೋಶ’ ಎಂದು. ಸಂಪಾದಕರು ಚಿಂತಾಮಣಿ ಕೇಲೆಬ್ ಮತ್ತು ಇ ಸ್ಟಾಂಲೆ ಎಡ್ವಡ್ರ್ಸ್‌. ಇದರಲ್ಲಿ ಕ್ರೈಸ್ತಧರ್ಮ, ಪುರಾಣ ಮತ್ತು ಆಚರಣೆಗಳಿಗೆ ಸಂಬಂದಿಸಿದ ವಿಷಯಗಳನ್ನು ಅಕಾರಾದಿಯಾಗಿ ಕೊಡಲಾಗಿದೆ. ತಮಿಳಿನಲ್ಲಿ ಇದು ಮೊದಲು ಅಚ್ಚಾಗಿದ್ದು ಅನಂತರ ಹೆಚ್ಚಿನ ವಿವರಗಳೊಂದಿಗೆ ಕನ್ನಡಕ್ಕೆ ಅನುವಾದಗೊಂಡಿದೆ. ಇವನ್ನು ಬಾಲಪಾಠಗಳು ಎನ್ನಲಾಗಿದೆ. ಅಂದರೆ ಕ್ರೈಸ್ತಧರ್ಮಾದಿಗಳನ್ನು ತಿಳಿಯಬಯಸುವವರಿಗೆ ಇದು ಪ್ರವೇಶವಿದ್ದಂತೆ. ಇಲ್ಲಿಯ ಲೇಖನಗಳು ಅದಿsಕೃತವಾಗಿವೆ. ಭಾಷೆ ಲಲಿತವಾಗಿದೆ. ಪ್ರತಿವಿಷಯಕ್ಕೂ ವಿಪುಲವಾಗಿ ಆಧಾರಗಳನ್ನು ಕೊಡಲಾಗಿದೆ. ಭಾಷಾದೃಷ್ಟಿಯಿಂದಲೂ ಈ ಗ್ರಂಥ ವಿಚಾರಯೋಗ್ಯವಾಗಿದೆ.

ಕನ್ನಡ ವಿಶ್ವಕೋಶ: 14 ಸಂಪುಟಗಳ ಸಾಮಾನ್ಯ ವಿಶ್ವಕೋಶ. ಈ ಯೋಜನೆಯಂತೆ ಈಗ ಎಲ್ಲ ಸಂಪುಟಗಳೂ ಪ್ರಕಟವಾಗಿವೆ (2005). 1969ರ ನವೆಂಬರ್ 21ರಂದು ಮೊದಲ ಸಂಪುಟ ಬಿಡುಗಡೆಯಾಯಿತು. 20 ಮಾರ್ಚ್ 2005ರಂದು 14ನೆಯ ಸಂಪುಟ ಬಡುಗಡೆಯಾಯಿತು. ಇದರ ಸಂಕ್ಷಿಪ್ತ ಚರಿತ್ರೆ ಮತ್ತು ವಿವರಗಳು ಹೀಗಿವೆ:

1954ರಷ್ಟು ಹಿಂದೆಯೇ ಕೆ.ವಿ.ಪುಟ್ಟಪ್ಪನವರ ನೇತೃತ್ವದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಈ ಬಗ್ಗೆ ಯೋಜನೆಯೊಂದನ್ನು ಸಿದ್ಧಪಡಿಸಿ ಮೈಸೂರು ಸರ್ಕಾರಕ್ಕೆ ಒಪ್ಪಿಸಿತು. ಈ ಯೋಜನೆಯ ಪುರೈಕೆಗೆ ವಿದ್ಯಾಭ್ಯಾಸ ಇಲಾಖೆಯ ಅಂಗವಾಗಿ ಒಂದು ಪ್ರತ್ಯೇಕ ಭಾಗವನ್ನೆ ಸರ್ಕಾರ ತೆರೆಯಿತಾದರೂ ಈ ಕೆಲಸ ನಿಧಾನಗತಿಯಲ್ಲಿ ನಡೆದಿತ್ತು. ಹತ್ತು ವರ್ಷ ಕಳೆದ ಮೇಲೂ ಪ್ರಥಮ ಸಂಪುಟ ಬಿಡುಗಡೆಯಾಗುವ ಚಿಹ್ನೆಗಳೇ ಇರಲಿಲ್ಲ. ಯೋಜನೆಯನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ವರ್ಗಾಯಿಸಲಾದದ್ದು 1968ರಲ್ಲಿ.

ಅದೇ ವರ್ಷ ಮೇ ತಿಂಗಳಿನಲ್ಲಿ ದೇ.ಜವರೇಗೌಡರ ನೇತೃತ್ವದಲ್ಲಿ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಕನ್ನಡ ವಿಶ್ವಕೋಶದ ಕಾರ್ಯ ವ್ಯವಸ್ಥಿತವಾಗಿ ಆರಂಭವಾಯಿತು. ಮೊದಲ ಕೆಲವು ತಿಂಗಳುಗಳಲ್ಲಿ ಎದುರಾದ ವಿಘ್ನಗಳು ಅನೇಕ. ಕಾರ್ಯ ಕೈಗೊಳ್ಳಲು ಅಗತ್ಯವಾದ ಸೂಕ್ತ ಸಿಬ್ಬಂದಿಯ ಅಭಾವ, ವಿಷಯಗಳ ಮತ್ತು ಲೇಖಕರ ಆಯ್ಕೆ, ವಿಶ್ವಕೋಶದ ಸ್ವರೂಪ ನಿಷ್ಕರ್ಷೆ, ಚಿತ್ರರಚನೆ, ಲೇಖನಗಳ ಬೆರಳಚ್ಚು, ಮುದ್ರಣಕಾರ್ಯ ಇವು ಪರಿಹಾರವಾಗಬೇಕಾಗಿದ್ದ ಕೆಲವು ಸಮಸ್ಯೆಗಳು. ಒಟ್ಟಿನಲ್ಲಿ ವಿಶ್ವಕೋಶ ತನ್ನದೇ ಆದ ವಿಧಾನವೊಂದನ್ನು ರೂಪಿಸಿಕೊಳ್ಳುವುದು ಅವಶ್ಯವಾಗಿತ್ತು. ಆ ವರ್ಷ ಕಳೆಯುವುದರೊಳಗೆ ಕಾರ್ಯದ ಸಮಗ್ರ ಯೋಜನೆ ಸಿದ್ಧವಾಯಿತು. 1969 ಅಂತ್ಯವಾಗುವ ಮುನ್ನವೇ ವಿಶ್ವಕೋಶದ ಪ್ರಥಮ ಸಂಪುಟವನ್ನು ಜನತೆಯ ಕೈಯಲ್ಲಿಡಬಹುದೆಂಬ ಭರವಸೆ ಮೂಡಿದ್ದು ಆಗ.

ಕನ್ನಡ ವಿಶ್ವಕೋಶದ ಮೊದಲ ಸಂಪುಟದ ಪ್ರಕಟಣೆ ಕನ್ನಡ ಭಾಷೆಯ ಇತಿಹಾಸದಲ್ಲೊಂದು ಮಹೋಜ್ವಲ ಘಟನೆ. ಈ ಕೋಶ ಮತ್ತೊಂದು ವಿಚಾರವನ್ನೂ ಸ್ಪಷ್ಟಪಡಿಸಿದೆ. ವೈಜ್ಞಾನಿಕ, ಮಾನವಿಕ, ತಾಂತ್ರಿಕ ಯಾವುದೇ ವಿಷಯವನ್ನಾದರೂ ಕನ್ನಡದಲ್ಲಿ ಸರಳವಾಗಿ, ಸುಲಭವಾಗಿ ಹೃದಯವೇದ್ಯವಾಗುವಂತೆ ಹೇಳಬಹುದೆಂಬುದಕ್ಕೆ ಈ ಸಂಪುಟ ಸಾಕ್ಷೀಭೂತವಾಗಿದೆ. ಕನ್ನಡ ವಿಜ್ಞಾನಭಾಷೆಯಾಗಿ ಬೆಳೆದಿಲ್ಲವೆಂಬ ಸೊಲ್ಲು ಎಷ್ಟು ನಿರರ್ಥಕವಾದುದೆಂಬುದನ್ನು ಈ ಸಂಪುಟ ಪ್ರಮಾಣೀಕರಿಸುತ್ತದೆ ಎಂದು ಆಗ ಪ್ರಧಾನ ಸಂಪಾದಕರಾಗಿದ್ದ ದೇ. ಜವರೇಗೌಡ ಅವರು ಪೀಠಿಕೆಯಲ್ಲಿ ಬರೆದಿದ್ದಾರೆ.

ಸಂಪುಟಗಳ ಮುಖ್ಯ ಲಕ್ಷಣಗಳಿವು: ಗ್ರಂಥದ ಆಕಾರ ಡೆಮಿ ಚತುರ್ಥಾಕಾರದ ಸು.1000 ಪುಟ, 10 ಪಾಯಿಂಟ್ ಅಕ್ಷರದಲ್ಲಿ  ಆಕರ್ಷಕ ಮುದ್ರಣ. ಕನ್ನಡ ವರ್ಣಮಾಲೆಯ ಅಕಾರದಿಂದಾರಂಭವಾಗಿ ಳಕಾರದ ವರೆಗೆ ವಿವಿಧ ವಿಷಯಗಳ ಮೇಲೆ ಲೇಖನಗಳು. ಆವಶ್ಯವಿದ್ದೆಡೆಯಲ್ಲೆಲ್ಲ ಚಿತ್ರ. ಇವುಗಳಲ್ಲಿ ಹಲವು ಹೊಳಪು ಕಾಗದದ ಮೇಲೆ ಅಚ್ಚಾಗಿರುವುದಲ್ಲದೆ ಕೆಲವು ವರ್ಣರಂಜಿತ. ಇಂಗ್ಲಿಷಿನ ಬ್ರಿಟಾನಿಕ ವಿಶ್ವಕೋಶದ ಮಾದರಿಯಲ್ಲೆ ಇದರ ವಿನ್ಯಾಸ.

ಸಾಮಾನ್ಯ ವಿಶ್ವಕೋಶದಲ್ಲಿ ಈ ಶಾಸ್ತ್ರಗಳೆಲ್ಲ ಅಡಕವಾಗಿವೆ: ಸೌಂದರ್ಯ ತತ್ತ್ವ, ಪಾಶ್ಚಾತ್ಯಸಾಹಿತ್ಯ, ಪೌರಸ್ತ್ಯಸಾಹಿತ್ಯ, ಜನಪದಕಲೆ, ಜೀವನ, ಅರ್ಥಶಾಸ್ತ್ರ, ತತ್ತ್ವ ಮತ್ತು ಧರ್ಮ, ಸಮಾಜ ವಿಜ್ಞಾನ, ಪ್ರಾಕ್ತನಶಾಸ್ತ್ರ, ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ, ವಾಣಿಜ್ಯ, ವ್ಯಾಪಾರ, ಶಿಕ್ಷಣ, ಸಮರ ವಿಜ್ಞಾನ, ನ್ಯಾಯಶಾಸ್ತ್ರ, ಮನೋವಿಜ್ಞಾನ, ಲಲಿತಕಲೆ, ಉಪಯುಕ್ತ ಕಲೆ, ಸಂಸ್ಕೃತ ಭಾಷೆ, ಸಾಹಿತ್ಯ, ಕನ್ನಡ ಭಾಷೆ, ಸಾಹಿತ್ಯ, ಭಾಷಾ ವಿಜ್ಞಾನ, ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ, ಭೂವಿಜ್ಞಾನ, ವೈದ್ಯ, ಆಯುರ್ವೇದ, ಯುನಾನಿ, ಹೋಮಿಯೋಪತಿ, ಕೃಷಿ, ತೋಟಗಾರಿಕೆ, ಪಶುವೈದ್ಯ, ಶಿಲ್ಪ, ಕ್ರೀಡೆ, ಪತ್ರಿಕೋದ್ಯಮ, ಗ್ರಂಥಾಲಯ ವಿಜ್ಞಾನ, ಮುದ್ರಣ ವಿಜ್ಞಾನ, ಸಂಖ್ಯಾಶಾಸ್ತ್ರ, ಅರಣ್ಯ ವಿಜ್ಞಾನ ಇತ್ಯಾದಿ.

ಕನ್ನಡ ವಿಶ್ವಕೋಶ ಕಚೇರಿಯ ಕಾರ್ಯವಿಧಾನದ ಬಗ್ಗೆ ಕೆಲವು ಮಾತುಗಳನ್ನು ಇಲ್ಲಿ ಬರೆಯಬಹುದು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ವಿಶ್ವಕೋಶದ ಅದಿsಕಾರ ಪ್ರಯುಕ್ತ (ಎಕ್ಸ್‌ - ಅಪಿಷಿಯೋ) ಪ್ರಧಾನ ಸಂಪಾದಕರು. ಈ ಕಾರ್ಯ ನಿರ್ವಹಣೆಯಲ್ಲಿ ಇವರಿಗೆ ನೆರವು ನೀಡುವವರು ನಾಲ್ವರು ಸಂಪಾದಕರು. ವಿಜ್ಞಾನಕ್ಕಾಗಿ ಒಬ್ಬರು, ಮಾನವಿಕ ವಿಭಾಗಕ್ಕೊಬ್ಬರು, ಇಡೀ ಸಂಪಾದನ ಕಾರ್ಯದ ಸಂಯೋಜನಕ್ಕಾಗಿ ಒಬ್ಬರು, ಯೋಜನೆಯ ಕಾರ್ಯನಿರ್ವಹಣೆಗಾಗಿ ಒಬ್ಬರು, ಸಹ ಸಂಪಾದಕರು ಒಬ್ಬರು, ಇವರ ಜೊತೆಗೆ ಮೂವರು ಸಹಾಯಕ ಸಂಪಾದಕರು ಮತ್ತು ಐವರು ಉಪಸಂಪಾದಕರು. ಈಗ ಈ ವ್ಯವಸ್ಥೆಯಲ್ಲಿ ಕಾಲನುಕ್ರಮದಲ್ಲಿ ಅನೇಕ ಬದಲಾವಣೆಗಳಾಗಿವೆ. ಲೇಖನಗಳನ್ನು ಬರೆಯುವ ಕಾರ್ಯವನ್ನು ವಿವಿಧ ಕ್ಷೇತ್ರಗಳಲ್ಲಿ ಸಮರ್ಥ ವಿದ್ವಾಂಸರಿಗೆ ಒಪ್ಪಿಸಲಾಗುತ್ತದೆ. ಈ ಲೇಖನಗಳನ್ನು ಅವರು ಕನ್ನಡದಲ್ಲೇ ಬರೆಯಬೇಕೆಂಬ ಕಡ್ಡಾಯವೇನೂ ಇಲ್ಲ. ಆಧುನಿಕ ವಿಷಯಗಳನ್ನು ಸರಳ ಶೈಲಿಯಲ್ಲಿ ನಿಷ್ಕೃಷ್ಟವಾಗಿ ನಿರೂಪಿಸಬೇಕೆಂಬುದು ವಿಶ್ವಕೋಶಗಳ ಮುಖ್ಯ ಉದ್ದೇಶ. ಹೀಗೆ ಸಿದ್ಧವಾದ ಲೇಖನಗಳನ್ನು ಸಂಪಾದಕರು, ಪರಿಶೀಲಿಸುವರಲ್ಲದೆ ಸಂಬಂಧಪಟ್ಟ ಕೆಲವನ್ನು ಗೌರವ ಸಮಾಲೋಚಕರ ಅವಗಾಹನೆಗಾಗಿಯೂ ಕಳುಹಿಸಲಾಗುವುದು. ವಿಷಯದ ಹೂರಣ, ಅಬಿವ್ಯಕ್ತಿ, ಚಿತ್ರಗಳು, ಆವಶ್ಯವಾದ ಹಾಗೂ ಲಭ್ಯವಿರುವ ಹೊಸ ವಿಚಾರಗಳ ಅಡಕ, ಶೈಲಿ ಮತ್ತು ತಾಂತ್ರಿಕ ಶಬ್ದಗಳ ಏಕರೂಪತೆ, ಸೂಕ್ತ ಸ್ವರೂಪ ಇವು ಸಂಪಾದಕರು ಮುಖ್ಯವಾಗಿ ಗಮನಿಸುವ ವಿಚಾರ. ಲೇಖಕರಿಂದ ತರಿಸಿದ ಲೇಖನಗಳೇ ಅಲ್ಲದೆ ಹೊಸ ಲೇಖನಗಳನ್ನೂ ಸಂಪಾದಕ ವರ್ಗದವರು ಬರೆಯುತ್ತಾರೆ. ಸದಾ ಕಣ್ಣಿಟ್ಟು ವಿಷಯ ವೈವಿಧ್ಯವನ್ನೂ ಅದರ ವಿಬಿsನ್ನ ಮುಖಗಳನ್ನೂ ಒದಗಿಸುವುದು ಸಂಪಾದಕ ವರ್ಗದ ವಿಶಿಷ್ಟ ಕಾರ್ಯಭಾಗ.

ಹೀಗೆ ಶಾಸ್ತ್ರೀಯವಾಗಿ ವೈಜ್ಞಾನಿಕವಾಗಿ ಸಿದ್ಧವಾದ ವಿಶ್ವಕೋಶದ ಒಂದೊಂದು ಹೊಸ ಸಂಪುಟದ ಬಿಡುಗಡೆಯೊಂದಿಗೆ ಕನ್ನಡ ಭಾಷೆಗೆ ಒಂದೊಂದು ಹೊಸ ಆಯಾಮ ಲಭ್ಯವಾಗಿ ಭಾಷೆಗೆ ದೊರಕಿದ ಈ ಹೊಸ ಸತ್ತ್ವಸಂಪತ್ತಿಯಿಂದ ಕೋಶದ ಮುಂದಿನ ಸಂಪುಟಗಳು ಮತ್ತಷ್ಟು ಶ್ರೀಮಂತಗೊಂಡಿವೆ.

ಕನ್ನಡ ವಿಷಯ ವಿಶ್ವಕೋಶ: ಸಾಮಾನ್ಯ ವಿಶ್ವಕೋಶಗಳು ಗಳಿಸಿದ ಯಶಸ್ಸಿನ ದೃಷ್ಟಿಯಿಂದ ವಿಷಯ ವಿಶ್ವಕೋಶಗಳನ್ನು ಹೊರತರಲು ಬೃಹದ್ಯೋಜನೆಯೊಂದನ್ನು ತಯಾರಿಸಲಾಯಿತು. ಪ್ರಾಣಿವಿಜ್ಞಾನ, ಗಣಿತವಿಜ್ಞಾನ, ವೈದ್ಯವಿಜ್ಞಾನ ಮುಂತಾದ 16 ವಿಜ್ಞಾನ ವಿಷಯಗಳು; ಕರ್ನಾಟಕ, ಇತಿಹಾಸ, ತತ್ತ್ವಶಾಸ್ತ್ರ, ಭಾಷಾವಿಜ್ಞಾನ ಮುಂತಾದ 14 ಮಾನವಿಕ ಶಾಸ್ತ್ರ ವಿಷಯಗಳು - ಹೀಗೆ ಒಟ್ಟು 30 ಸ್ವತಂತ್ರ ಸಂಪುಟಗಳನ್ನು ಹೊರತರುವ ಯೋಜನೆ ಇದಾಗಿದೆ. ಇಡೀ ಯೋಜನೆಯ ವೆಚ್ಚ ಸು.90ಲಕ್ಷ ರೂಪಾಯಿಗಳು. ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಸಂಪುರ್ಣವಾಗಿ ಒಪ್ಪಿಕೊಂಡು ಈ ಹೊಣೆಯನ್ನೂ ಮೈಸೂರು ವಿಶ್ವವಿದ್ಯಾನಿಲಯಕ್ಕೇ ವಹಿಸಿಕೊಟ್ಟಿತ್ತು. 

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಆಶ್ರಯದಲ್ಲಿ ಪ್ರಾರಂಭವಾದ ಈ ಕೆಲಸದಲ್ಲಿ ವಿಷಯ ವಿಶ್ವಕೋಶ ಯೋಜನೆಯ ಮೊದಲ ಸಂಪುಟವಾಗಿ ಕರ್ನಾಟಕ -ವಿಷಯ ವಿಶ್ವಕೋಶ ಪ್ರಕಟಿಸಲಾಯಿತು (1979). ಸುದೀರ್ಘ ಇತಿಹಾಸದ ಶ್ರೀಮಂತ ಸಂಸ್ಕೃತಿಯ ಬಹುಮುಖ ಪ್ರಗತಿಯ ಕರ್ನಾಟಕವನ್ನು ತಿಳಿಯಲು ಈ ವಿಶ್ವಕೋಶವೊಂದು ಅದಿsಕೃತ ಆಕರವಾಗಿದೆ. ಈ ವಿಶ್ವಕೋಶ ವಿಷಯದ ಆಯ್ಕೆ, ನಿರೂಪಣೆ ಮತ್ತು ತಾಂತ್ರಿಕತೆಯ ದೃಷ್ಟಿಯಿಂದ ಸಾಮಾನ್ಯವಿಶ್ವಕೋಶಕ್ಕಿಂತ ಬಿನ್ನವಾಗಿದೆ. 1790 ಲೇಖನಗಳನ್ನೊಳಗೊಂಡ ಈ ಹೆಬ್ಬೊತ್ತಿಗೆ ಕನ್ನಡ ಪ್ರಕಟಣೆಯಲ್ಲಿ ಒಂದು ಮೈಲಿಗಲ್ಲು. ಕರ್ನಾಟಕ ವಿಷಯ ವಿಶ್ವಕೋಶದ ಪ್ರತಿಗಳೆಲ್ಲ ಮಾರಾಟವಾಗಿ ಅದರ ಪುನರ್ಮುದ್ರಣ ಮತ್ತು ಪರಿಷ್ಕರಣೆಗೆ ಬೇಡಿಕೆ ಹೆಚ್ಚಿದುದನ್ನು ಮನಗಂಡ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಈ ಸಂಪುಟದ ಪರಿಷ್ಕರಣೆ ಹಾಗೂ ಪುನರ್ ಮುದ್ರಣ ಕಾರ್ಯವನ್ನು ಪುರೈಸಿ ಎರಡು ಸಂಪುಟಗಳಲ್ಲಿ ಮುದ್ರಿಸಿದೆ (). ಇದಲ್ಲದೆ ಜಾನಪದ, ಪ್ರಾಣಿವಿಜ್ಞಾನ, ಇತಿಹಾಸ ಮತ್ತು ಪ್ರಾಕ್ತನ, ಸಸ್ಯವಿಜ್ಞಾನ ಎಂಬ ವಿಷಯ ವಿಶ್ವಕೋಶ ಸಂಪುಟಗಳೂ ಪ್ರಕಟಗೊಂಡಿವೆ. ಇದರ ಜೊತೆಗೆ ಕನ್ನಡ ವಿಶ್ವಕೊಶದ 14 ಸಂಪುಗಳನ್ನು ಅಡಕತಟ್ಟೆಯಲ್ಲಿ (ಸಿಡಿ) ತರುವುದರೊಂದಿಗೆ ಪರಿಷ್ಕರಿಸಿ ಪುನರ್ ಮುದ್ರಿಸುವ ಕೆಲಸವೂ ನಿರಂತರವಾಗಿ ನಡೆದಿದೆ. ಮೊದಲ 7 ಸಂಪುಟಗಳು ಅಲ್ಪಸ್ವಲ್ಪ ಪರಿಷ್ಕಾರಗಳೊಂದಿಗೆ ಪುನರ್ಮುದ್ರಣಗೊಂಡಿದ್ದು (2013-14ರಲ್ಲಿ) ಹಳೆಯ 6 ಸಂಪುಟಗಳು ಕ್ರಿಯೆಟಿವ್ ಕಾಮನ್ಸ್‌ ಪರವಾನಗಿಯಡಿಯಲ್ಲಿ ವಿಕಿಪೀಡಿಯಾದಲ್ಲಿ ಅಂತರ್ಜಾಲದಲ್ಲಿ ಬಿಡುಗಡೆಗೊಂಡಿವೆ (15-07-2014).

ಜ್ಞಾನಗಂಗೋತ್ರಿ: ಏಳು ಸಂಪುಟಗಳ ಕಿರಿಯರ ವಿಶ್ವಕೋಶ. ಕನ್ನಡ ವಿಶ್ವಕೋಶ ರಚನೆಯ ಹೊಣೆಯನ್ನು ಮೈಸೂರು ವಿಶ್ವವಿದ್ಯಾನಿಲಯ ವಹಿಸಿಕೊಂಡ ಸರಿಸುಮಾರಿನಲ್ಲೆ (1968) ಇದರ ಯೋಜನೆಯೂ ಆರಂಭವಾಯಿತು. ಬೆಂಗಳೂರಿನ ಕರ್ನಾಟಕ ಸಹಕಾರಿ ಪ್ರಕಾಶನದವರಿಗೆ ಈ ಯೋಜನೆಯನ್ನು ವಹಿಸಿಕೊಟ್ಟ ಸರ್ಕಾರ ಈ ಕಾರ್ಯಕ್ಕಾಗಿ 34 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿತ್ತು. ಜ್ಞಾನಗಂಗೋತ್ರಿಯ ಸಂಪಾದಕ ಮಂಡಳಿಗೆ ದೇಜಗೌ ಅಧ್ಯಕ್ಷರೂ ನಿರಂಜನರು ನಿಯಂತ್ರಕರೂ ಹಾಗೂ ಪ್ರಧಾನ ಸಂಪಾದಕರೂ ಆಗಿದ್ದರು. ಇವರಲ್ಲದೆ ಉಪಸಂಪಾದಕರೂ ವ್ಯವಸ್ಥಾಪಕ ಸಂಪಾದಕರೂ ಆಡಳಿತಾದಿsಕಾರಿಗಳೂ ಇದ್ದರು. ಮನುಕುಲದ ಕಥೆ; ಜೀವಜಗತ್ತು; ಭೌತಜಗತ್ತು; ಯಂತ್ರ ಜಗತ್ತು; ಕಲೆ, ಸಾಹಿತ್ಯ; ಕ್ರೀಡೆ, ಮನೋಲ್ಲಾಸ; ಭಾರತದ ಕಥೆ ಎಂಬ ಏಳು ಸಂಪುಟಗಳು ಪ್ರಕಟಗೊಂಡಿವೆ (1970-1974). ಒಂದೊಂದು ಸಂಪುಟದ ಬೆಲೆ ಐವತ್ತು ರೂಪಾಯಿ. ಏಳೂ ಸಂಪುಟಗಳ ಒಟ್ಟು ಬೆಲೆ 350 ರೂಪಾಯಿ. ಮನುಕುಲದ ಕಥೆಯಲ್ಲಿ ನವಜೀವನದಿಂದ ಚಂದ್ರಯಾನದ ತನಕ, ನಾಗರಿಕತೆಗಳು, ಧರ್ಮಗಳು, ತತ್ತ್ವಜ್ಞಾನಿಗಳು, ರಾಜ್ಯಗಳ ಉದಯ, ರಾಜಕೀಯ ವ್ಯವಸ್ಥೆಗಳು, ವ್ಯಾಪಾರ, ವಾಣಿಜ್ಯ, ಕೈಗಾರಿಕೆ, ಭೂಗೋಳ, ಇತಿಹಾಸ ಪ್ರಸಿದ್ಧ ಸ್ತ್ರೀ ಪುರುಷರು - ಈ ವಿಷಯಗಳಿಗೆ ಸಂಬಂಧಪಟ್ಟಂತೆ ಲೇಖನಗಳಿವೆ. ಜೀವಜಗತ್ತಿನಲ್ಲಿ ಸಸ್ಯವಿಜ್ಞಾನ, ಪ್ರಾಣಿವಿಜ್ಞಾನ, ಶರೀರವಿಜ್ಞಾನ, ಮನೋವಿಜ್ಞಾನ, ವೈದ್ಯಕೀಯ, ಶಸ್ತ್ರಚಿಕಿತ್ಸೆ, ಕೃಷಿ, ಮತ್ಸ್ಯೋದ್ಯಮ, ತೋಟಗಾರಿಕೆ, ವಿಖ್ಯಾತ ಜೀವವಿಜ್ಞಾನಿಗಳು - ಇವುಗಳ ವಿಷಯ ನಿರೂಪಿತವಾಗಿದೆ. ಭೌತಜಗತ್ತಿನಲ್ಲಿ ಭೌತವಿಜ್ಞಾನ, ರಸಾಯನ ವಿಜ್ಞಾನ, ಖಗೋಳ ವಿಜ್ಞಾನ, ಗಣಿತ, ಭೂವಿಜ್ಞಾನ, ಪವನ ವಿಜ್ಞಾನ, ಮ್ಯೋಮಯಾನ, ಗ್ರಹಾಂತರ ಯಾನ, ಈ ಕ್ಷೇತ್ರದ ಪ್ರಸಿದ್ಧ ವಿಜ್ಞಾನಿಗಳು ಮೊದಲಾದ ವಿಷಯಗಳಿವೆ. ಯಂತ್ರಜಗತ್ತು ಇದರಲ್ಲಿ ಎಂಜಿನಿಯರಿಂಗ್, ಮಿಲಿಟರಿ, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ತಾಂತ್ರಿಕತೆ, ಘನ, ಲಘು, ಬೃಹತ್ ಪ್ರಮಾಣದ ಕೈಗಾರಿಕೋದ್ಯಮಗಳು, ದೂರ ಸಂಪರ್ಕಸಾಧನ, ಎಲೆಕ್ಟ್ರಾನಿಕ್, ಈ ಕ್ಷೇತ್ರಗಳ ಕೀರ್ತಿಶಾಲಿಗಳು- ಈ ವಿಷಯಗಳಿವೆ. ಕಲೆ ಸಾಹಿತ್ಯದಲ್ಲಿ ನೃತ್ಯ, ಸಂಗೀತ, ನಾಟಕ ಕಲೆ, ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ಸಾಹಿತ್ಯ, ಆರಂಭದ ನಾಗರಿಕತೆಯಿಂದ ಆಧುನಿಕ ಅವದಿsಯತನಕ, ಭಾರತೀಯ ಮತ್ತು ಗ್ರೀಕ್ ಮಹಾಕಾವ್ಯಗಳು, ಕರ್ನಾಟಕದ, ಭಾರತದ, ವಿದೇಶಗಳ ಖ್ಯಾತ ಕಲಾವಿದರು, ಸಾಹಿತಿಗಳು ಈ ವಿವಿಧ ವಿಷಯಗಳು ತುಂಬ ಸೊಗಸಾಗಿ ಪ್ರತಿಪಾದಿತವಾಗಿವೆ. ಕ್ರೀಡೆ, ಮನಲ್ಲಾಸದಲ್ಲಿ ಜಗತ್ತಿನ ಕ್ರೀಡೆಗಳು, ಆಟಗಳು, ಶರೀರ ಶಿಕ್ಷಣ, ಪ್ರಸಿದ್ಧ ಕ್ರೀಡಾಪಟುಗಳು, ಒಲಿಂಪಿಕ್ ವೀರರು, ಹವ್ಯಾಸಗಳು, ಮನೋರಂಜನೆಯ ವಿಷಯಗಳು ಇವೆ. ಭಾರತದ ಕಥೆಯು ಚರಿತ್ರ ಪುರ್ವ ಕಾಲಾವದಿsಯಿಂದ ಗಾಂದಿ ಯುಗದ ತನಕ, ಪ್ರವಾಸಿಗರು ಕಂಡ ಭಾರತ, ಪ್ರಾಚೀನ ಭಾರತದಲ್ಲಿ ವಿಜ್ಞಾನ ಸಾಹಿತ್ಯ, ಪುರಾಣ ವ್ಯಕ್ತಿಗಳು, ಧರ್ಮೋಪದೇಶಕರು, ರಾಷ್ಟ್ರ ನಿರ್ಮಾಪಕರು, ಮಹಾನ್ ಆಡಳಿತಗಾರರು, ದಾಸ್ಯ-ಸ್ವಾತಂತ್ರ್ಯ, ಭಾರತದ ಭೂಗೋಳ, ಕೃಷಿ, ಕೈಗಾರಿಕೋದ್ಯಮ, ಭಾರತ ಮತ್ತು ಮ್ಯೋಮಯುಗ, ವಿವಿಧತೆಯಲ್ಲಿ ಏಕತೆ - ಈ ಮೊದಲಾದ ವಿಷಯಗಳಿಂದ ತುಂಬಿದೆ. ಒಟ್ಟು ಏಳು ಸಂಪುಟಗಳಲ್ಲಿ 17 ಲಕ್ಷ ಪದಗಳೂ 3782 ಲೇಖನಗಳೂ 3800 ರೇಖಾಚಿತ್ರಗಳೂ 3750 bsÁಯಾಚಿತ್ರಗಳೂ 291 ವರ್ಣಚಿತ್ರಗಳೂ ಸಂದರ್ಭಸೂಚಿಯ ಪದಗಳೂ ಇವೆ. ಈ ಸಂಪುಟಗಳನ್ನು ಸಿದ್ಧಪಡಿಸುವಾಗ ಕನ್ನಡ ನಾಡಿನ ಅನೇಕ ಪ್ರಸಿದ್ಧ ಲೇಖಕರಿಂದ ಮೂಲ ಸಾಹಿತ್ಯವನ್ನೂ ಸಿದ್ಧ ಲೇಖನಗಳನ್ನೂ ತರಿಸಿಕೊಳ್ಳಲಾಗಿದೆ. 11 ರಿಂದ 18 ವರ್ಷ ವಯಸ್ಸಿನವರನ್ನು ಉದ್ದೇಶದಲ್ಲಿಟ್ಟುಕೊಂಡು ಸಿದ್ಧಮಾಡಿದ ಈ ಗ್ರಂಥಗಳಲ್ಲಿ ವಿಷಯ ವೈವಿಧ್ಯ, ಅವುಗಳ ಆಯ್ಕೆ, ನಿರೂಪಣೆ, ವಿಶ್ಲೇಷಣೆ, ಸಂಯೋಜನೆ, ವಿವರಣೆ ಉತ್ಕೃಷ್ಟತೆಯಿಂದ ಕೂಡಿದೆ. ಕನ್ನಡ ಜ್ಞಾನ ಸಾಹಿತ್ಯದ ಇತಿಹಾಸದಲ್ಲಿ ಜ್ಞಾನಗಂಗೋತ್ರಿಗೆ ಒಂದು ಗಣನೀಯ ಸ್ಥಾನ ದೊರಕುತ್ತದೆ ಎಂಬುದನ್ನು ಈ ಸಂಪುಟಗಳು ಸಿದ್ಧಪಡಿಸಿ ತೋರುತ್ತವೆ.

ಕನ್ನಡ ಜಾನಪದ ವಿಶ್ವಕೋಶ: ಕನ್ನಡ ಸಾಹಿತ್ಯ ಪರಿಷತ್ತು ಹೆಸರಾಂತ ಜಾನಪದ ವಿದ್ವಾಂಸ ಚಂದ್ರಶೇಖರ ಕಂಬಾರ (ನೋಡಿ) ಅವರ ಸಂಪಾದಕತ್ವದಲ್ಲಿ ಕನ್ನಡ ಜಾನಪದ ವಿಶ್ವಕೋಶವನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ (1985). ಕನ್ನಡ ನಾಡಿನ ನಂಬಿಕೆ, ಹಾಡು, ಸಂಪ್ರದಾಯ, ಕಥೆ, ಪುರಾಣ, ಗಾದೆ, ಬಯಲಾಟಗಳಂತಹ ಜಾನಪದ ಪ್ರಕಾರಗಳನ್ನು ಕುರಿತಂತೆ ಈ ಸಂಪುಟದಲ್ಲಿ ವಿಶ್ಲೇಷಿಸಲಾಗಿದೆ. ಜನಪದ ಆಚರಣೆಗಳು, ಆಟಗಳು, ಒಡಪುಗಳು, ಒಗಟುಗಳು, ಐತಿಹ್ಯಗಳು, ಶಕುನಗಳು, ಪ್ರಾಣಿಪಕ್ಷಿಗಳು, ಖನಿಜಗಳು, ಮಳೆ-ಗಾಳಿ, ನಕ್ಷತ್ರಗಳು, ಲಾವಣಿಗಳು, ಹಬ್ಬ-ಜಾತ್ರೆಗಳು, ಆಹಾರ ಸಂಪ್ರದಾಯಗಳು ವಿವಿಧ ಜನಾಂಗಗಳು, ಶವಸಂಸ್ಕಾರ ಪದ್ಧತಿಗಳು - ಮುಂತಾದ ಹತ್ತಾರು ವಿಷಯಗಳನ್ನು ಕುರಿತಂತೆ ಇದರಲ್ಲಿ ಲೇಖನಗಳಿವೆ. ಜಾನಪದ ವಿದ್ಯಾರ್ಥಿಗಳನ್ನಷ್ಟೇ ಅಲ್ಲದೆ ಈ ಕ್ಷೇತ್ರದಲ್ಲಿ ಆಸಕ್ತಿ ಇರುವ ಸಾಮಾನ್ಯರನ್ನೂ ಗಮನದಲ್ಲಿಟ್ಟುಕೊಂಡು ಜಾನಪದಕ್ಕೆ ಸಂಬಂಧಪಟ್ಟ ಲೇಖನ, ಕಲ್ಪನೆಗಳನ್ನು, ಸಿದ್ಧಾಂತಗಳನ್ನು, ವಿದೇಶಗಳ ಜಾನಪದ ಸ್ವರೂಪವನ್ನು ಅವುಗಳ ಅಧ್ಯಯನ ಸಾಧನೆಗಳನ್ನು ಇಲ್ಲಿ ವಿಶದವಾಗಿ ನಿರೂಪಿಸಲಾಗಿದೆ.

ಹಂಪಿ ಕನ್ನಡ ವಿಶ್ವವಿದ್ಯಾನಿಯಲದ ವಿಶ್ವಕೋಶಗಳು: ಹಂಪಿಯ ಕನ್ನಡ ವಿಶ್ವವಿದ್ಯಾಲಯ ವಿವಿಧ ವಿಶ್ವಕೋಶಗಳು ಎಂಬ ಹನ್ನೆರಡು ಸಂಪುಟಗಳ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಈಗಾಗಲೆ 8 ವಿಷಯಗಳಿಗೆ ಸಂಬಂದಿಸಿದಂತೆ ಕೃತಿಗಳನ್ನು ಪ್ರಕಟಿಸಿದೆ: ವೈದ್ಯ, ಜನಪದ ಕಲೆ, ಸಮಾಜಕಾರ್ಯ, ಭಾಷೆ, ಧರ್ಮ, ಕರಕುಶಲ ಕಲೆ. ಈ ವಿಶ್ವಕೋಶಗಳು ವಿಷಯ ವೈವಿಧ್ಯತೆಯಿಂದ ಕೂಡಿದ್ದು ನಾಡಿನ ಹೆಸರಾಂತ ವಿದ್ವಾಂಸರು ಲೇಖನಗಳನ್ನು ಬರೆದಿದ್ದಾರೆ.

ಕಿರಿಯರ ಕರ್ನಾಟಕ ವಿಶ್ವಕೋಶ: ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಸಂಪುರ್ಣ ಚಿತ್ರಣವನ್ನು ಕನ್ನಡ ನಾಡಿನ ಕಿರಿಯರಿಗೆ ನೀಡುವ ಉದ್ದೇಶದಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯ ಕಿರಿಯರ ಕರ್ನಾಟಕ ವಿಶ್ವಕೋಶವನ್ನು ಪ್ರಕಟಿಸಿದೆ. 12 ರಿಂದ 17 ವರ್ಷದ ವಯೋಮಾನದವರನ್ನು ದೃಷ್ಟಿಯಲ್ಲಿರಿಸಿಕೊಂಡು ಈ ಸಚಿತ್ರ ಸಂಪುಟವನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಕರ್ನಾಟಕದ ಇತಿಹಾಸ, ಭಾಷೆ, ಸಾಹಿತ್ಯ, ಪತ್ರಿಕೋದ್ಯಮ, ಕೃಷಿ, ಕೈಗಾರಿಕೆ, ಉದ್ಯೋಗ, ಜಾನಪದ, ಶಿಕ್ಷಣ ಮೊದಲಾದ ವಿಷಯಗಳನ್ನು ಕುರಿತು ಸರಳ ನಿರೂಪಣೆ ಇದೆ.	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ